ಮುಲಿಕನ್, ರಾಬರ್ಟ್ ಸಾಂಡರ್ಸನ್
1896. ಅಮೆರಿಕದ ರಸಾಯನವಿಜ್ಞಾನಿ. ಜನನ ನ್ಯೂಬರಿಪೋರ್ಟ್ 7-6-1896. ಭೌತರಸಾಯನ ವಿಜ್ಞಾನದಲ್ಲಿ ಮೂಲಭೂತ ಸಂಶೋಧನೆಗೈದು ಪ್ರಸಿದ್ಧರಾಗಿದ್ದಾರೆ. ಇವರು ರಾಸಾಯನಿಕಬಂಧಗಳಿಗೆ ಸಂಬಂಧಿಸಿದ ಅನೇಕ ಸಮಸ್ಯೆಗಳಿಗೆ ಕ್ವಾಂಟಮ್ ಸಿದ್ಧಾಂತದ ತತ್ತ್ವಗಳನ್ನು ಪ್ರಯೋಗಿಸಿ ಉತ್ತರಗಳನ್ನು ಕಂಡುಹಿಡಿದಿದ್ದಾರೆ. ಇವರ ಅತಿ ಮುಖ್ಯ ಸಾಧನೆಗಳನ್ನು ಇಲ್ಲಿ ವಿವರಿಸಿದೆ.

1 ಮುಲಿಕನ್ ಪಾದರಸ ಸಮಸ್ಥಾನಿಗಳ ಬೇರ್ಪಡೆಯ ಸಂಶೋಧನ ಕಾರ್ಯದಲ್ಲಿ ತೊಡಗಿದ್ದಾಗ ಸಮಸ್ಥಾನಿಗಳನ್ನು ಆವೀಕರಣ ಅಪಕೇಂದ್ರಕ (ಇವಾಪರೇಟಿವ್ ಸೆಂಟ್ರಿಪ್ಯೊಜಿಂಗ್) ವಿಧಾನ ಉಪಯೋಗಿಸಿ ಬೇರ್ಪಡಿಸಬಹುದೆಂದು ತೋರಿಸಿಕೊಟ್ಟರು. ಸಮಸ್ಥಾನಿಗಳಿದ್ದಾಗ ದ್ವಿಪರಮಾಣುರೋಹಿತಗಳ (ಡೈ ಅಟಾಮಿಕ್ ಸ್ಪೆಕ್ಟ್ರ) ಮೇಲೆ ಅವುಗಳಿಂದ ಉಂಟಾಗುವ ಪರಿಣಾಮಗಳನ್ನು ಪ್ರಯೋಗಗಳ ಮೂಲಕ ಕ್ರಮಬದ್ಧವಾಗಿ ಅಭ್ಯಾಸಮಾಡಿ ಈ ಪರಿಶೀಲನೆಯಿಂದ ಅಣುಗಳಲ್ಲಿಯ ಎಲೆಕ್ಟ್ರಾನ್‍ಸ್ಥಿತಿಯನ್ನು ವಿವರಿಸಬಹುದೆಂದು ಹೇಳಿದರು.

2 ರಾಸಾಯನಿಕಬಂಧದ ಒಂದು ಸಿದ್ಧಾಂತವನ್ನು ಮುಲಿಕನ್ 1927ರಲ್ಲಿ ಮಂಡಿಸಿದರು. ಇದನ್ನು ಅವರ ಅತಿಮಹತ್ತ್ವದ ಸಾಧನೆ ಎನ್ನಬಹುದು. ಎಫ್. ಹುಂಡ್ ಎಂಬವರ ಜೊತೆಯಲ್ಲಿ ತಾತ್ತ್ವಿಕ ಸಂಶೋಧನೆ ನಡೆಸಿ ಅಣುಗಳಲ್ಲಿಯ ಎಲೆಕ್ಟ್ರಾನ್ ಶಕ್ತಿಸ್ಥಿತಿಗಳನ್ನು ವಿವರಿಸುವ ಅಣುಕಕ್ಷಕಸಿದ್ಧಾಂತ ಮಂಡಿಸಿದರು. ಇದರ ಪ್ರಕಾರ ಪರಮಾಣುಗಳ ಸಂಯೋಜನೆಯಿಂದ ಅಣುಗಳು ಉಂಟಾದಾಗ, ಪರಮಾಣುವಿನ ಎಲೆಕ್ಟ್ರಾನುಗಳು ತಮ್ಮ ಮೂಲವಿನ್ಯಾಸವನ್ನು ಕಳೆದುಕೊಂಡು, ಅಣುಗಳಲ್ಲಿಯ ಅಣುಕಕ್ಷಕಗಳಲ್ಲಿ ವ್ಯವಸ್ಥೆಯಾಗುತ್ತದೆ. ಈ ವಿವರಣೆ ಅಣು ರಾಸಾಯನಿಕ ರಚನೆಯ ಹೈಟ್ಲರ್ ಮತ್ತು ಲಂಡನ್ ಅವರ ವೇಲೆನ್ಸ್‍ಬಂಧ ಸಿದ್ಧಾಂತಕ್ಕಿಂತಲೂ ಅನುಕೂಲಕರವೆಂದು ಮುಲಿಕನ್ ತೋರಿಸಿಕೊಟ್ಟರು. ಏಕೆಂದರೆ ಅಣುರಚನೆ ಆದಾಗ ಪರಮಾಣು ಎಲೆಕ್ಟ್ರಾನುಗಳ ಮೂಲವಿನ್ಯಾಸದಲ್ಲಿ ಬದಲಾವಣೆ ಆಗುವುದಿಲ್ಲವೆಂದು ವೇಲೆನ್ಸ್ ಬಂಧ ಸಿದ್ಧಾಂತ ಪ್ರತಿಪಾದಿಸುತ್ತದೆ.

3 ಅಣುರಚನೆ ಆದಾಗ ಪರಮಾಣುಕಕ್ಷಕಗಳು ಒಂದರ ಮೇಲೊಂದು ಅಧಿವ್ಯಾಪಿಸುವುದನ್ನು ಪರಿಮಾಣಾತ್ಮಕವಾಗಿ ಶೋಧಿಸಿ ಅವುಗಳಿಂದ ಅನುಕಕ್ಷಕಬಂಧ ಶಕ್ತಿಯನ್ನು ಗಣಿಸಬಹುದೆಂದು ಮುಲಿಕನ್ ತೋರಿಸಿಕೊಟ್ಟರು. ಇದರಿಂದ ಅಣುಕಕ್ಷಕಗಳ ವಾಸ್ತವಿಕ ಆಕಾರಗಳನ್ನು ಕೂಡ ಊಹಿಸಿಕೊಳ್ಳಬಹುದೆಂಬುದು ಮುಲಿಕನ್ನರ ಸಿದ್ಧಾಂತ. ಅಣುಕಕ್ಷಕಶಕ್ತಿಯ ತಾರತಮ್ಯಗಳನ್ನು ಅಣುರೋಹಿತಗಳಿಂದ ಅಂದಾಜುಮಾಡಬಹುದೆಂದು ಇವರು ತಿಳಿಸಿದ್ದಾರೆ.

4 ಮುಲಿಕನ್ ತಮ್ಮ ತಾತ್ತ್ವಿಕಾನ್ವೇಷಣೆಯನ್ನು ಮುಂದುವರಿಸಿ ಪರಮಾಣುಗಳ ಅಯಾನೀಕರಣ ವಿಭವ I ಮತ್ತು ಎಲೆಕ್ಟ್ರಾನ್ ಒಲವು ಇ (ಎಲೆಕ್ಟ್ರಾನ್ ಅಫಿನಿಟಿ) ಇವನ್ನು ಉಪಯೋಗಿಸಿಕೊಂಡು ಪರಮಾಣುಗಳ ವಿದ್ಯುತ್ ಋಣತ್ವವನ್ನು (ಘಿ) ಶೋಧಿಸಬಹುದೆಂದು ತಿಳಿಸಿದ್ದಾರೆ. ಇವರ ಪ್ರಕಾರ ಘಿ=ಳಿ (I+E). ಅಣು ಕಕ್ಷಕಗಳ ಧ್ರುವೀಯತೆ ಮತ್ತು ಅಣುಕಕ್ಷಕ ಮತ್ತು ಅಣುಗಳ ದ್ವಿಧ್ರುವ ಭ್ರಮಣಾಂಕ (ಡೈಪೋಲ್ ಮೊಮೆಂಟ್) ಇವುಗಳ ನಡುವಿನ ಸಂಬಂಧಗಳನ್ನು ರೂಢಿಸಿದರು.

6 1952ರಲ್ಲಿ ಇವರು ಎಲೆಕ್ಟ್ರಾನ್ ದಾನಿ ಮತ್ತು ಗ್ರಾಹಿಗುಣಗಳಿರುವ ಅಣುಗಳ ಪರಸ್ಪರಕ್ರಿಯೆಗಳ ಸಂಶೋಧನೆಯಲ್ಲಿ ತೊಡಗಿದ್ದಾಗ ಅಣುಸಂಕೀರ್ಣಗಳ ವಿದ್ಯುತ್ ವರ್ಗಾವಣೆ ರೋಹಿತ ಮತ್ತು ಅದರ ಗುಣಗಳನ್ನು ಅಧ್ಯಯನ ಮಾಡಿದರು. ಈ ರೋಹಿತಾಧ್ಯಯನಕ್ಕೆ ಕ್ವಾಂಟಮ್ ಸಿದ್ಧಾಂತಗಳನ್ನು ಉಪಯೋಗಿಸಲಾಯಿತು.
(ಡಿ.ಎಸ್.ಎಂ.)
ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ